ಪ್ರಜಾವಾಣಿ ವಾರ್ತೆ Updated:
26 ಜುಲೈ 2021, 09:49 IST
ಅಕ್ಷರ ಗಾತ್ರ :ಆ |ಆ |ಆ
ಶಿರಾಳಕೊಪ್ಪ: ಹತ್ತಿರದ ಮಾಯತಮ್ಮ ಮುಚುಡಿ ಗ್ರಾಮದ 23 ಜನರ ಮೇಲೆ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಮಾಯತಮ್ಮನ ಮುಚುಡಿ ಗ್ರಾಮದ ಪರಿಶಿಷ್ಟ ಸಮುದಾಯದ ಕೇರಿಯ ಕೆಲವು ಮನೆಗಳ ಒಳಗೆ ನೀರು ನುಗ್ಗಿತ್ತು. ಪ್ರಸ್ತುತ ಇರುವ ಕಾಲುವೆಯಲ್ಲಿ ನೀರು ಹೋಗದಿದ್ದರಿಂದ ಪಿಡಿಒ ಅನುಮತಿ ಪಡೆದು ಪರಿಶಿಷ್ಟ ಸಮುದಾಯದ ವೀರೇಶ್ ಪಕ್ಕದಲ್ಲಿ ಇನ್ನೊಂದು ನೀರಿನ ಕಾಲುವೆ ಮಾಡುವ ಮೂಲಕ ನೀರನ್ನು ಕಳುಹಿಸಿದ್ದರು.
‘ಈ ರೀತಿ ಕಾಲುವೆ ಮಾಡಿದ್ದರಿಂದ ಹಾಲಿನ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಸವರ್ಣೀಯರು ಗಾಡಿಗಳನ್ನು ಅಡ್ಡ ಹಾಕಿ, ಮಹಿಳೆಯರನ್ನು ಕರೆದುಕೊಂಡು ಬಂದು ಜಾತಿನಿಂದನೆ ಮಾಡಿ ಹಲ್ಲೆ ಮಾಡಲು ಯತ್ನಿಸಿದ್ದಾರೆ’ ಎಂದು ವೀರೇಶ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ 23 ಜನರ ಮೇಲೆ ಜಾತಿನಿಂದನೆ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ದೂರುದಾರ ವೀರೇಶ್ ಮಾತನಾಡಿ, ‘ಇದು ನೂತನ ರಸ್ತೆಯಾಗಿದ್ದು, ಹಾಲಿನ ವಾಹನಗಳು ಓಡಾಡಲು ಬೇರೆ ರಸ್ತೆಗಳಿದ್ದರೂ ದುರುದ್ದೇಶ ಪೂರ್ವಕವಾಗಿ ಮೇಲ್ವರ್ಗದವರು ಬಂದು ಗಲಾಟೆ ಮಾಡಿದ್ದಾರೆ. ಜೂನ್ ತಿಂಗಳಲ್ಲಿ ನಾವು ಸಾಗುವಳಿ ಮಾಡುತ್ತಿದ್ದ ಜಮೀನನ್ನು ಸರ್ಕಾರಿ ಅಧಿಕಾರಿಗಳ ಮೂಲಕ ತೆರವುಗೊಳಿಸಿಲು ಯತ್ನಿಸಿದ್ದರು. ಅದು ಸಾಧ್ಯವಾಗಲಿಲ್ಲ. ಹಾಗಾಗಿ, ನಾವು ಒಯ್ದ ಹಾಲನ್ನು ಡೇರಿಯಲ್ಲಿ ಹಾಕಿಸಿಕೊಳ್ಳುವುದಿಲ್ಲ. ನಮ್ಮನ್ನು ಯಾವುದೇ ಕೆಲಸಕ್ಕೆ ಕರೆಯದೆ ಬಹಿಷ್ಕಾರ ಸಹ ಹಾಕಿದ್ದಾರೆ. ಇದರಿಂದ ಪರಿಶಿಷ್ಟ ಸಮುದಾಯದವರು ಊರಿನಲ್ಲಿ ಬದುಕುವುದೇ ಕಷ್ಟವಾಗಿದ್ದು, ಪೊಲೀಸರು ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು