ಇಂದ್ರಜಿತ್ ವಿರುದ್ಧ ದರ್ಶನ್ ಅಭಿಮಾನಿಗಳ ಆಕ್ರೋಶ ಪ್ರಜಾವಾಣಿ ವಾರ್ತೆ Updated: 24 ಜುಲೈ 2021, 09:27 IST ಅಕ್ಷರ ಗಾತ್ರ :ಆ |ಆ |ಆ ಚಾಮರಾಜನಗರ: ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ನಟ ದರ್ಶನ್ ವಿರುದ್ಧ ಸುಳ್ಳು ಆರೋಪ ಮಾಡುತ್ತಾ ಅವರ ತೇಜೋವಧೆ ಮಾಡುತ್ತಿದ್ದು, ಕೂಡಲೇ ಬಹಿರಂಗ ಕ್ಷಮೆಯಾಚನೆ ಮಾಡಬೇಕು ಎಂದು ದರ್ಶನ್ ತೂಗದೀಪ್ ಅಭಿಮಾನಿಗಳ ಬಳಗದವರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸೇರಿದ ಅಭಿಮಾನಿಗಳು, ಇಂದ್ರಜಿತ್ ವಿರುದ್ದ ಧಿಕ್ಕಾರ ಕೂಗಿದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಅಭಿಮಾನಿಗಳ ಬಳಗದ ಅಧ್ಯಕ್ಷ ವಿನಯ್ ಅವರು ಮಾತನಾಡಿ, ‘ದರ್ಶನ್ ಅವರ ಏಳಿಗೆಯನ್ನು ಸಹಿಸದ ಕೆಲವರು ಪಿತೂರಿ ಮಾಡಿ, ಅವರ ವಿರುದ್ಧ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ, ಅವರ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ನಟನೆ ಜೊತೆಗೆ ಪ್ರಾಣಿಗಳ ಮೇಲೆ ವಿಶೇಷ ಪ್ರೀತಿ ಇಟ್ಟುಕೊಂಡಿರುವ ದರ್ಶನ್ ಅವರು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವುದು ಸುಳ್ಳು. ಇಂದ್ರಜಿತ್ ಅವರು ಮಾಡಿರುವ ಆರೋಪಗಳು ಆಧಾರ ರಹಿತವಾಗಿದ್ದು, ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು. ಅವತಾರ್ ಪ್ರವೀಣ್, ಜೆ.ಡಿ.ನಾಗೇಶ್, ಬಿಪಿ. ಪ್ರಕಾಶ್, ಸಂತೋಷ್, ಸ್ವಾಮಿ, ಮಹೇಶ್, ಪ್ರತಾಪ್, ಅಶಿತ್, ಮಣಿ ಇತರರು ಇದ್ದರು.