Covid-19: PMSSY Hospital ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಿಂದಾಗಿ ಉಳಿದ ರೋಗಿಗಳ ಚಿಕಿತ್ಸೆಗೆ ಆದ್ಯತೆ ಪಿಎಂಎಸ್‌ಎಸ್‌ವೈ: ಕೋವಿಡೇತರ ಸೇವೆಗೆ ಸಿದ್ಧತೆ ವರುಣ ಹೆಗಡೆ Updated: 30 ಜೂನ್ 2021, 02:19 IST ಅಕ್ಷರ ಗಾತ್ರ :ಆ |ಆ |ಆ ಬೆಂಗಳೂರು: ಪೂರ್ಣ ಪ್ರಮಾಣದ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿದ್ದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು (ಪಿಎಂಎಸ್‌ಎಸ್‌ವೈ) ಕೋವಿಡೇತರ ಸೇವೆ ಪ್ರಾರಂಭಿಸಲು ಸಜ್ಜಾಗುತ್ತಿದೆ. ಶಸ್ತ್ರಚಿಕಿತ್ಸೆಗಳು ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆಗಳನ್ನು ಜುಲೈ ಎರಡನೇ ವಾರದಲ್ಲಿ ಪ್ರಾರಂಭಿಸಲು ಆಸ್ಪತ್ರೆ ಯೋಜನೆ ರೂಪಿಸಿದೆ. ಮಾರ್ಚ್ ಮೂರನೇ ವಾರದ ಬಳಿಕ ನಗರದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಏರುಗತಿ ಪಡೆದುಕೊಂಡಿತ್ತು. ಎರಡನೇ ಅಲೆಯಲ್ಲಿ ವೈರಾಣು ವೇಗವಾಗಿ ವ್ಯಾಪಿಸಿಕೊಳ್ಳುವ ಜತೆಗೆ ಸೋಂಕಿನ ತೀವ್ರತೆಗೆ ಗಂಭೀರವಾಗಿ ಅಸ್ವಸ್ಥಗೊಳ್ಳುವವರ ಸಂಖ್ಯೆ ಏರಿಕೆಯಾಗಿದ್ದರಿಂದ ಹಾಸಿಗೆಗಳ ಸಮಸ್ಯೆ ತಲೆದೋರಿತ್ತು. ವಿಕ್ಟೋರಿಯಾ ಹಾಗೂ ಟ್ರಾಮಾ ಕೇರ್‌ನಲ್ಲಿ ಹಾಸಿಗೆಗಳು ಭರ್ತಿಯಾಗಿದ್ದರಿಂದ 200 ಹಾಸಿಗೆಗಳ ಪಿಎಂಎಸ್‌ಎಸ್‌ವೈ ಆಸ್ಪತ್ರೆಯನ್ನು ಕೂಡ ಪೂರ್ಣ ಪ್ರಮಾಣದ ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಲಾಗಿತ್ತು. ಆಸ್ಪತ್ರೆಯು 30 ಐಸಿಯು ಹಾಸಿಗೆ, 48 ವೈದ್ಯಕೀಯ ಆಮ್ಲಜನಕ ಸಂಪರ್ಕ ಸಹಿತ ಹಾಸಿಗೆ, 28 ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳನ್ನು ಒಳಗೊಂಡಿದೆ. ಈ ಹಾಸಿಗೆಗಳು ಕೋವಿಡ್ ಚಿಕಿತ್ಸೆಗೆ ಸಹಕಾರಿಯಾಗಿದ್ದವು. ಆದರೆ, ಇದೇ ವೇಳೆ ಹೃದ್ರೋಗ, ನರರೋಗ, ಯಕೃತ್ತು ಸಮಸ್ಯೆ ಸೇರಿದಂತೆ ವಿವಿಧ ಗಂಭೀರ ಕಾಯಿಲೆಗಳನ್ನು ಎದುರಿಸುತ್ತಿರುವವರಿಗೆ ಅಲ್ಲಿ ಚಿಕಿತ್ಸೆ ಲಭ್ಯವಿರದ ಕಾರಣ ಸಮಸ್ಯೆಯಾಗಿತ್ತು. ಆಸ್ಪತ್ರೆ ಸ್ವಚ್ಛತೆ: ಕೋವಿಡ್ ಪೀಡಿತರ ಸಂಖ್ಯೆ ಇಳಿಕೆಯಾಗಿರುವುದರಿಂದ ಕೆಲ ದಿನಗಳಿಂದ ವಿಕ್ಟೋರಿಯಾ ಸೇರಿದಂತೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ಬಹುತೇಕ ಹಾಸಿಗೆಗಳು ಖಾಲಿಯಿವೆ. ವಿಕ್ಟೋರಿಯಾ ಆಸ್ಪತ್ರೆ ಸಂಕೀರ್ಣದಲ್ಲಿ ಕೋವಿಡ್ ಚಿಕಿತ್ಸೆಗೆ 54 ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆ ಸೇರಿದಂತೆ 500 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಅವುಗಳಲ್ಲಿ ಸದ್ಯ 447 ಹಾಸಿಗೆಗಳು ಖಾಲಿಯಿವೆ. ಹೀಗಾಗಿ, ವಿಕ್ಟೋರಿಯಾ ಮತ್ತು ಟ್ರಾಮಾ ಕೇರ್‌ನಲ್ಲಿ ಮಾತ್ರ ಕೋವಿಡ್ ಚಿಕಿತ್ಸೆ ಒದಗಿಸಲಾಗುತ್ತಿದೆ. ಪಿಎಂಎಸ್‌ಎಸ್‌ವೈ ಆಸ್ಪತ್ರೆಯಲ್ಲಿ ಸ್ವಚ್ಛತಾಕಾರ್ಯ ಪ್ರಾರಂಭವಾಗಿದೆ. ‘ಆಸ್ಪತ್ರೆಯನ್ನು ಕೋವಿಡೇತರ ಸೇವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಆಸ್ಪತ್ರೆ ಎಲ್ಲ ರೀತಿಯಲ್ಲಿಯೂ ಸುರಕ್ಷಿತವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕೆಲವೊಂದು ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ’ ಎಂದು ವೈದ್ಯರೊಬ್ಬರು ತಿಳಿಸಿದರು. ಹಂತ ಹಂತವಾಗಿ ಕೋವಿಡೇತರ ಸೇವೆ ನಗರದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಇಳಿಕೆ ಕಂಡಿರುವ ಕಾರಣ ಕೋವಿಡೇತರ ಚಿಕಿತ್ಸೆಗೆ ಕೂಡ ಈಗ ಆದ್ಯತೆ ನೀಡಲಾಗುತ್ತಿದೆ. ಜಯನಗರ ಸಾರ್ವಜನಿಕ ಆಸ್ಪತ್ರೆ, ಕೆ.ಸಿ. ಜನರಲ್ ಆಸ್ಪತ್ರೆ, ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡೇತರ ಸೇವೆಗಳಿಗೆ ಹೆಚ್ಚಿನ ಹಾಸಿಗೆಗಳನ್ನು ಮೀಸಲಿಡಲಾಗುತ್ತಿದೆ. ವಿಕ್ಟೋರಿಯಾ ಮತ್ತು ಬೌರಿಂಗ್‌ನಲ್ಲಿ ಕೋವಿಡ್ ಹಾಗೂ ಕಪ್ಪು ಶಿಲೀಂಧ್ರ ಸೋಂಕಿಗೆ ಹಾಸಿಗೆಗಳನ್ನು ಮೀಸಲಿಡಲಾಗಿದೆ. ಸರ್.ಸಿ.ವಿ ರಾಮನ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಮಾತ್ರ ನೀಡಲಾಗುತ್ತಿದೆ. ‘ಕೋವಿಡ್ ಪ್ರಕರಣಗಳು ಇಳಿಕೆಯಾಗಿರುವುದರಿಂದ ಕೋವಿಡೇತರ ಚಿಕಿತ್ಸೆಗೆ ಕೂಡ ಆದ್ಯತೆ ನೀಡಬೇಕಾಗಿದೆ. ಹಾಗಾಗಿ, ಈಗಾಗಲೇ ಕೆಲವು ಆಸ್ಪತ್ರೆಗಳಲ್ಲಿ ಕೋವಿಡ್ ಜತೆಗೆ ಕೋವಿಡೇತರ ಚಿಕಿತ್ಸೆಗಳನ್ನೂ ಪ್ರಾರಂಭಿಸಲಾಗಿದೆ. ಸರ್.ಸಿ.ವಿ. ರಾಮನ್ ಆಸ್ಪತ್ರೆಯಲ್ಲಿ ಕೋವಿಡೇತರ ಸೇವೆ ಪ್ರಾರಂಭಿಸಲು ಆಯುಕ್ತರ ಜತೆಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು’ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ. ಶ್ರೀನಿವಾಸ್ ತಿಳಿಸಿದರು. _ ಇಪ್ಪತ್ತು ದಿನಗಳಿಂದ ಪಿಎಂಎಸ್‌ಎಸ್‌ವೈ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಜುಲೈ ಎರಡನೇ ವಾರದಲ್ಲಿ ಕೋವಿಡೇತರ ಸೇವೆಗಳು ಪ್ರಾರಂಭವಾಗುವ ಸಾಧ್ಯತೆಯಿದೆ. -ಡಾ.ಪಿ.ಜಿ. ಗಿರೀಶ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ