Workers in expectation of compensation Conditions are complications ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ ಲಕ್ಷ ಕಾರ್ಮಿಕರ ನೋಂದಣಿ; ಪರಿಶೀಲನೆಗೆ ಮುಂದಾದ ಕಾರ್ಮಿಕ ಇಲಾಖೆ ಅಧಿಕಾರಿಗಳು ಪರಿಹಾರ ನಿರೀಕ್ಷೆಯಲ್ಲಿ ಶ್ರಮಿಕರು: ಷರತ್ತುಗಳೇ ತೊಡಕು ಚಂದ್ರಕಾಂತ ಮಸಾನಿ Updated: 28 ಜೂನ್ 2021, 10:30 IST ಅಕ್ಷರ ಗಾತ್ರ :ಆ |ಆ |ಆ ಬೀದರ್: ಲಾಕ್‌ಡೌನ್ ಅವಧಿಯಲ್ಲಿ ಸರ್ಕಾರ ಕಟ್ಟಡ ಕಾಮಗಾರಿಗೆ ಅವಕಾಶ ನೀಡಿದ್ದರೂ ಕಾಮಗಾರಿ ಸ್ಥಗಿತಗೊಂಡವು. ಜಿಲ್ಲೆಯ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬಂದರು. ಸರ್ಕಾರ ಅವರಿಗೆ ಪರಿಹಾರ ಧನ ಪ್ರಕಟಿಸಿದ ನಂತರ ನಿಟ್ಟುಸಿರು ಬಿಟ್ಟರಾದರೂ ತಾಂತ್ರಿಕ ಕಾರಣಗಳಿಂದ ಇಂದಿಗೂ ಅನೇಕ ಕಾರ್ಮಿಕರ ಕೈಗೆ ಪರಿಹಾರ ಸೇರಿಲ್ಲ. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಆಡಳಿತ ವಲಸೆ ಕಾರ್ಮಿಕರಿಗೆ ಬೀದರ್ ಹಾಗೂ ಹುಮನಾಬಾದ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿ ಅವರಿಗೆ ಊಟದ ವ್ಯವಸ್ಥೆಯನ್ನೂ ಮಾಡಿತ್ತು. ಎರಡನೇ ಅಲೆಯಲ್ಲಿ ಪರಿಹಾರ ಘೋಷಿಸಿ ದರೂ ಅನೇಕ ಕಾರ್ಮಿ ಕರಿಗೆ ಅದರ ಬಗ್ಗೆ ತಿಳಿದೇ ಇಲ್ಲ. ನಗರ ಹಾಗೂ ನಗರಕ್ಕೆ ಹೊಂದಿಕೊಂಡಿರುವ ಹಲವಾರು ಕಾರ್ಮಿಕರು ನಿತ್ಯ ಗುಂಪಾ ರಸ್ತೆಯ ಎಂ.ಎಸ್.ಪಾಟೀಲ ಫಂಕ್ಷನ್ ಹಾಲ್ ಬಳಿಗೆ ಬಂದು ಕೆಲಸಕ್ಕಾಗಿ ಕಾಯುವುದು ಮುಂದುವರಿದಿದೆ. ಕಾರ್ಮಿಕರ ಸ್ಥಿತಿ ಕೆಲಸವೂ ಇಲ್ಲ, ಪರಿಹಾರವೂ ಇಲ್ಲ ಎನ್ನುವಂತಾಗಿದೆ. ‘ಕೆಲವರ ಬಳಿ ಜಾಬ್‌ಕಾರ್ಡ್ ಇಲ್ಲ. ಜಾಬ್‌ಕಾರ್ಡ್ ಇದ್ದರೂ ನವೀಕರಣ ಮಾಡಿಕೊಂಡಿಲ್ಲ. ಬ್ಯಾಂಕ್‌ನಲ್ಲಿ ಖಾತೆ ಇದ್ದರೂ ಆಧಾರ್ ಲಿಂಕ್ ಮಾಡಿಸಿಲ್ಲ. ಈ ಕಾರಣಗಳಿಂದಾಗಿಯೇ ಕೆಲವರ ಖಾತೆಗೆ ಪರಿಹಾರ ಧನ ಜಮಾ ಆಗಿಲ್ಲ’ ಎಂದು ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಹಾ ಸಂಘದ ಅಧ್ಯಕ್ಷ ಸೂರ್ಯಕಾಂತ ಸಾದುರೆ ಹೇಳುತ್ತಾರೆ. ವರ್ಷದಲ್ಲಿ ಒಂದೂವರೆ ಪಟ್ಟು ಹೆಚ್ಚಿದ ಕಾರ್ಮಿಕರು ಒಂದು ವರ್ಷದ ಅವಧಿಯಲ್ಲಿ ಬೀದರ್ ಜಿಲ್ಲೆಯಲ್ಲಿ ಕಾರ್ಮಿಕರ ಸಂಖ್ಯೆ ಒಂದೂವರೆ ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ 72 ಸಾವಿರ ಇದ್ದ ನೋಂದಾಯಿತ ಕಾರ್ಮಿಕರ ಸಂಖ್ಯೆ ಈ ವರ್ಷ 1.80 ಲಕ್ಷಕ್ಕೆ ಏರಿದೆ. ಸರ್ಕಾರದ ಕಾರ್ಮಿಕರಿಗೆ ಪರಿಹಾರ ಕೊಡಲಿರುವ ಸುಳಿವು ದೊರೆತ ತಕ್ಷಣ ಬಹಳಷ್ಟು ಜನ ನೋಂದಣಿ ಮಾಡಿಕೊಂಡಿ ದ್ದಾರೆ. ಬೀದರ್, ಕಲ್ಯಾಣ ಕರ್ನಾಟಕದಲ್ಲಿ ಅತಿ ಹೆಚ್ಚು ಕಾರ್ಮಿಕರು ನೋಂದಣಿ ಮಾಡಿಕೊಂಡಿರುವ ಜಿಲ್ಲೆ ಎನಿಸಿಕೊಂಡಿದೆ. ಇಷ್ಟೊಂದು ಸಂಖ್ಯೆಯಲ್ಲಿ ನೋಂದಣಿಯಾಗಿರು ವುದು ಸಂಶಯಕ್ಕೂ ದಾರಿ ಮಾಡಿಕೊಟ್ಟಿದೆ. ಕಾರ್ಮಿಕರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಕಾರ್ಮಿಕ ಇಲಾಖೆ ಪೋರ್ಟಲ್‌ನಲ್ಲಿ ನೇರವಾಗಿ ನೋಂದಣಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ನರೇಗಾದಲ್ಲಿ ಜಾಬ್‌ಕಾರ್ಡ್ ಪಡೆದ ಗ್ರಾಮೀಣ ಪ್ರದೇಶದವರೇ ಹೆಚ್ಚು ನೋಂದಣಿ ಮಾಡಿಕೊಂಡಿದ್ದಾರೆ. ತಾಂತ್ರಿಕ ಕಾರಣದಿಂದ ನಗರ ಪ್ರದೇಶದ ಕಾರ್ಮಿಕರಿಗೆ ನೋಂದಣಿ ಸಾಧ್ಯವಾಗಿಲ್ಲ. ಕಟ್ಟಡ ಕಾರ್ಮಿಕರು ಮೂರು ತಿಂಗಳು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡ ಬಗ್ಗೆ ಪ್ರಮಾಣಪತ್ರ ನೀಡಬೇಕು. ಆದರೆ, ಬಿಲ್ಡರ್‌ಗಳು ಪ್ರಮಾಣಪತ್ರ ಕೊಡಲು ಆಸಕ್ತಿ ತೋರಿಸುತ್ತಿಲ್ಲ. ಇದೇ ಕಾರಣಕ್ಕೆ ಕಾರ್ಮಿಕರು ಸರ್ಕಾರದ ಸೌಲಭ್ಯದಿಂದ ವಂಚಿತರಾಗಬೇಕಾಗಿದೆ. ‘ಕೆಲವರು ನಕಲಿ ದಾಖಲೆ ಸೃಷ್ಟಿಸಿ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಕೊಂಡಿರುವ ಸಾಧ್ಯತೆ ಇದೆ. ಈ ಕುರಿತು ಪರಿಶೀಲನೆ ಆರಂಭಿಸಲಾಗಿದ್ದು, ತಪ್ಪು ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಳ ಹೇಳಿದ್ದಾರೆ. ಹೋಟೆಲ್ ಕಾರ್ಮಿಕರು ಪರಿಹಾರದಿಂದ ವಂಚಿತ ಹೋಟೆಲ್ ಕಾರ್ಮಿಕರು ಹಾಗೂ ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ರಾಜ್ಯ ಸರ್ಕಾರ ಪರಿಹಾರ ಕಲ್ಪಿಸಿಲ್ಲ. ಹೋಟೆಲ್‌ಗಳಲ್ಲಿ ಪಾತ್ರೆ ತೊಳೆಯುವ ಕಾರ್ಮಿಕರು ಹಾಗೂ ಮನೆಗೆಲಸದವರು ಎರಡು ತಿಂಗಳು ಆರ್ಥಿಕ ಸಂಕಷ್ಟ ಎದುರಿಸಿದ್ದಾರೆ. ಮನೆಗೆಲಸ ಮಾಡುವ ಕಾರ್ಮಿಕರ ಸಂಘಟನೆ ಇಲ್ಲ. ಲಾಕ್‌ಡೌನ್ ಅವಧಿಯಲ್ಲಿ ಕುಟುಂಬದ ಸದಸ್ಯರೆಲ್ಲ ಮನೆಯಲ್ಲೇ ಇದ್ದ ಕಾರಣ ಎರಡು ತಿಂಗಳ ಅವಧಿಗೆ ಕೆಲಸ ಬಿಡಿಸಲಾಗಿತ್ತು. ಆದರೆ, ಇವರಿಗೆ ಯಾವುದೇ ರೀತಿಯ ನೆರವು ದೊರೆತಿಲ್ಲ. ಜಾಬ್‌ಕಾರ್ಡ್ ಪಡೆಯಲು ಯಾರಬಳಿ ಕೆಲಸ ಮಾಡುತ್ತಿರುವ ಪ್ರಮಾಣಪತ್ರ ತರಬೇಕು. ಅದನ್ನು ಹೇಗೆ ದೃಢೀಕರಿಸಬೇಕು ಎನ್ನುವುದು ಗೃಹ ಕಾರ್ಮಿಕರಿಗೆ ಗೊತ್ತಿಲ್ಲ. ಜಾಬ್‌ಕಾರ್ಡ್‌ಗೆ ವಿಧಿಸಿರುವ ಷರತ್ತುಗಳೇ ಇವರಿಗೆ ತೊಡಕಾಗಿವೆ. ಹೀಗಾಗಿ ಸರ್ಕಾರದ ಪರಿಹಾರ ಧನದಿಂದಲೂ ವಂಚಿತರಾಗಿದ್ದಾರೆ. ರಾಜ್ಯ ಸರ್ಕಾರ ಅಕ್ಕಸಾಲಿಗರನ್ನು ಪರಿಗಣಿಸಿದೆ. ಬಿದರಿ ಕಾರ್ಮಿಕರನ್ನು ಕಡೆಗಣಿಸಿದೆ. ಗೃಹ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅನಕ್ಷರಸ್ಥರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಅಕ್ಷರ ತಿಳಿದ ಅನೇಕ ಕಾರ್ಮಿಕರಿಗೆ ಅಂತರ್ಜಾಲ ಮೂಲಕ ನೋಂದಣಿ ಮಾಡುವ ಹಾಗೂ ಅರ್ಜಿ ಸಲ್ಲಿಕೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಕೆಲವರು ಪರಿಹಾರಧನ ಕೊಡಿಸುವ ನೆಪದಲ್ಲಿ ಕಾರ್ಮಿಕರಿಂದ ₹200 ರಿಂದ ₹500 ವಸೂಲಿ ಆರಂಭಿಸಿದ್ದಾರೆ. ‘ಕಾರ್ಮಿಕರಿಗೆ ಸಕಾಲದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಅಂದಾಗ ಮಾತ್ರ ಕಾರ್ಮಿಕರು ಏಜೆಂಟರ ಮುಷ್ಟಿಯಿಂದ ಹೊರಬರಲು ಸಾಧ್ಯವಾಗಲಿದೆ’ ಎಂದು ಹೋಟೆಲ್ ಕಾರ್ಮಿಕ ಸಂಗಪ್ಪ ಹೇಳುತ್ತಾರೆ. ಆರ್ಥಿಕ ನೆರವು: ಕಾರ್ಮಿಕರ ಖಾತೆಗೆ ನೇರ ಜಮಾ ‘ಲಾಕ್‌ಡೌನ್‌ನಲ್ಲಿ ಸಂಕಷ್ಟ ಅನುಭವಿಸಿರುವ ಹಾಗೂ ಸೇವಾ ಸಿಂಧು ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಕೊಂಡಿರುವ ಕಾರ್ಮಿಕರ ಖಾತೆಗಳಿಗೆ ಬೆಂಗಳೂರಿನಿಂದ ನೇರವಾಗಿ ಹಣ ಸಂದಾಯ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಳ ತಿಳಿಸಿದ್ದಾರೆ. ‘ಕಾರ್ಮಿಕರು ಒಂದು ವರ್ಷ ಹಾಗೂ ಮೂರು ವರ್ಷಗಳ ಅವಧಿಗೆ ಜಾಬ್‌ಕಾರ್ಡ್ ಮಾಡಿಕೊಂಡಿದ್ದಾರೆ. ಅವಧಿ ಮುಗಿಯುವ ಮೊದಲು ನವಿಕರೀಸಿಕೊಳ್ಳುವುದು ಅಗತ್ಯ. ಜಾಬ್‌ಕಾರ್ಡ್ ನವೀಕರಿಸಿಕೊಳ್ಳದಿದ್ದರೆ, ವ್ಯವಹಾರ ನಡೆಸದ ಕಾರಣ ಬ್ಯಾಂಕ್ ಖಾತೆ ಬಂದ್ ಆಗಿದ್ದರೆ, ಐಎಫ್‌ಎಸ್‌ಸಿ ಸಂಖ್ಯೆ ನಮೂದಿಸದಿದ್ದರೆ, ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡದಿದ್ದರೆ, ಹಣ ಜಮಾ ಆಗುವುದಿಲ್ಲ’ ಎಂದು ಹೇಳಿದ್ದಾರೆ. ‘ಕಾರ್ಮಿಕರು ನಿಗದಿತ ನಮೂನೆಯ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆ ಒದಗಿಸಿದರೆ ಸಾಕು. ನಗರ ಪ್ರದೇಶದ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಲ್ಲೇ ಜಾಬ್‌ಕಾರ್ಡ್ ಕೊಡಲಾಗುತ್ತಿದೆ. ಸೇವಾ ಸಿಂಧುದಲ್ಲಿ ಕಾರ್ಮಿಕರು ಹೆಸರು ನೋಂದಣಿ ಮಾಡಿಕೊಳ್ಳಲು ಸರ್ಕಾರ ನಿಗದಿಪಡಿಸಿದ ಸೇವಾ ಶುಲ್ಕ ಕೇವಲ ₹30 ಪಾವತಿಸಬೇಕಾಗುತ್ತದೆ. ಇಷ್ಟು ಬಿಟ್ಟು ಯಾರೂ ಹೆಚ್ಚು ಹಣ ಕೊಡಬಾರದು’ ಎಂದು ತಿಳಿಸಿದ್ದಾರೆ. ‘ಬೀದರ್ ಜಿಲ್ಲೆಯ ಎಷ್ಟು ಜನ ಕಾರ್ಮಿಕರಿಗೆ ಪರಿಹಾರ ದೊರಕಿದೆ ಎನ್ನುವುದು ಜಿಲ್ಲಾ ಮಟ್ಟದಲ್ಲಿ ಗೊತ್ತಾಗದು. ಪರಿಹಾರ ವಿತರಿಸಿದ ನಂತರ ಕೇಂದ್ರ ಕಚೇರಿಯಿಂದ ಜಿಲ್ಲಾ ಮಟ್ಟಕ್ಕೆ ಮಾಹಿತಿ ಕಳಿಸಲಾಗುತ್ತಿದೆ. ಆಗ ಸ್ಪಷ್ಟ ಮಾಹಿತಿ ದೊರಕಲಿದೆ’ ಎಂದು ಹೇಳಿದ್ದಾರೆ.